ಕವನ | ಕೆ.ಎಸ್. ನರಸಿಂಹಸ್ವಾಮಿ | ಮೈಸೂರು ಮಲ್ಲಿಗೆ
ಏನ ಬೇಡಲಿ ?...... ಕವನ ಸಂಕಲನ - ಮೈಸೂರು ಮಲ್ಲಿಗೆ.
------------------------------------------------------
ದೇವ, ನಿನ್ನ ಮಾಯೆಗಂಜಿ
ನಡುಗಿ ಬಾಡೆನು ;
ನಿನ್ನ ಇಚ್ಛೆಯಂತೆ ನಡೆವೆ -
ನಡ್ಡಿ ಮಾಡೆನು.
ಮುಕ್ತಿ ! ಮುಕ್ತಿ ! ನನ್ನ ನಾನು
ತಿಳಿದುಕೊಳ್ವುದೋ,
ಸಾವಿಗಂಜಿ ನಿನ್ನಡಿಯಲಿ
ಅಡಗಿಕೊಳ್ವುದೋ ?
ಶಕ್ತಿಯಿತ್ತೆ ಮುಕ್ತಿಯನ್ನು
ಗಳಿಸಿಕೊಳ್ಳುಲು ;
ನೀರನೆರೆದೆ ಬಳ್ಳಿಯನ್ನು
ಬೆಳಸಿಕೊಳ್ಳಲ್ಲು ;
ಜ್ಞಾನರವಿಯನಿತ್ತೆ ಎದೆಯ
ನೋಡಿಕೊಳ್ಳಲು ;
ಗೀತೆಯನ್ನು ಕೊಟ್ಟೆ ಕೊಳಲೊ -
ಳೂದಿಕೊಳ್ಳಲು.
ಎಲ್ಲವನ್ನು ಕೊಟ್ಟಿರುವ ;
ಏನ ಬೇಡಲಿ !
ಜಗವನೆನಗೆ ಬಿಟ್ಟಿರುವೆ
ಏಕೆ ಕಾಡಲಿ !
-ಕೆ ಎಸ್ ನರಸಿಂಹಸ್ವಾಮಿಯವರು.
No comments:
Post a Comment
Note: Only a member of this blog may post a comment.