ಸತ್ಯವಂತರ ಸಂಗವಿರಲು ತೀರ್ಥವೇತಕೆ
ನಿತ್ಯ ಜ್ಞಾನಿಯಾದ ಮೇಲೆ ಚಿಂತೆ ಯಾತಕೆ
ತಾನು ಉಣ್ಣದ ಪರರಿಗಿಕ್ಕದ ಧನವಿದ್ದೇತಕೆ
ಮಾನ ಹೀನನಾಗಿ ಬಾಳ್ವ ಮನುಜನೇತಕೆ
ಜ್ಞಾನವಿಲ್ಲದೇ ನೂರು ಕಾಲ ಬದುಕಲೇತಕೆ
ಮಾನಿನಿಯ ತೊರೆದವಗೆ ಭೋಗವೇತಕೆ
ಮಾತು ಕೇಳದೆ ಮಲತು ನಡೆವ ಮಕ್ಕಳೇತಕೆ
ಪ್ರೀತಿ ಇಲ್ಲದೆ ಎಡೆಯನಿಕ್ಕಿದ ಅನ್ನವೇತಕೆ
ನೀತಿಯರಿತು ನಡೆಯದಿರುವ ಬಂಟನೇತಕೆ
ಸೋತು ಹೆಣ್ಣಿಗೆ ಹೆದರಿ ನಡೆವ ಪುರುಷನೇತಕೆ
ಸಂಜ್ಞೆಯರಿತು ನಡೆಯದಿರುವ ಸತಿ ಇದ್ದೇತಕೆ
ಮುನ್ನ ಕೊಟ್ಟು ಪಡೆಯದನ್ನು ಬಯಸಲೇತಕೆ
ಮನ್ನಣೆಯ ನಡೆಸದಿರುವ ದೊರೆಯು ಏತಕೆ
ಚೆನ್ನ ಆದಿ ಕೇಶವನಲ್ಲದ ದೈವವೇತಕೆ
--ಕನಕದಾಸರು
No comments:
Post a Comment
Note: Only a member of this blog may post a comment.