ನಮ್ಮ ದೇವರು
೧
ದೇವರು ನಿಜವಾಗಿಯೂ
ಬೇಕಾಗಿರೋದು
ಈ ಇಬ್ಬರಿಗೆ
ಮಾತ್ರ;
ಗುಡಿಯೊಳಗಿರುವ
ಪೂಜಾರಿಗೆ
ಮತ್ತು ಮಹಾವಿರಾಗಿಯಾದ
ಸಾಧಕನಿಗೆ.
ಪೂಜಾರಿಗೆ ಅದೊಂದು
ಲಾಭದಾಯಕವಾದ
ವ್ಯಾಪಾರ.
ಮಹಾ ವಿರಾಗಿಯಾದ
ಸಾಧಕನಿಗೋ
ಅದು ಸಾಕ್ಷಾತ್ಕಾರ.
ನಮ್ಮ ನಿಮ್ಮಂಥವರಿಗೆ
ಭಕ್ತಿಯಷ್ಟೇ ಸಾಕು.
ಭಕ್ತಿ ಎಂದರೆ
ಯಾವುದಾದರೂ ಒಂದು ಕೊಂಡಿಗೆ
ತಗುಲಿಸಿಕೊಂಡು
ಜೋತಾಡುವುದು; ಹೀಗೆ
ಯಾವುದೇ ಅವಲಂಬನವಿಲ್ಲದೆ
ನಿರಾಳವಾಗಿ
ನೀಲಿಯಲ್ಲಿ ತೇಲಾಡುವ
ಆ ಗ್ರಹ-ತಾರೆ
ಚಂದ್ರ ಸೂರ್ಯಾದಿಗಳ
ಮಾತೇ ಬೇರೆ!
೨
ದೇವಸ್ಥಾನ ಎನ್ನವುದೊಂದು
ಭಕ್ತಿಯ
ಕ್ರೀಡಾಂಗಣ.
ಗಣ ಗಣ ಗಂಟೆ, ಮಣ ಮಣ
ಮಂತ್ರ. ಪೂಜಾರಿಯ
ಸುತ್ತ ನಿತ್ಯವೂ
ತಿರುಗುತ್ತಿರುವ
ಉತ್ಸವಗಳ ಯಂತ್ರ.
ಚಿಕ್ಕ ಮಕ್ಕಳಿಗಾದರೋ
ಬಗೆ ಬಗೆ ಬೊಂಬೆ
ಗಳಿವೆ ಆಟಿಕೆಗಳಿವೆ
ಆಟವಾಡುವುದಕ್ಕೆ.
ಈ ಬೆಳೆದ ದೊಡ್ಡವರಿಗೆ?
ಅವರೂ ಆಡಬೇಕಲ್ಲ?
ಅದಕ್ಕಾಗಿಯೇ
ಮೀಸಲಾಗಿವೆ ಅದೆಷ್ಟೋ
ಶತಮಾನದಿಂದ ಈ
ಉತ್ಸವಗಳೆಲ್ಲ.
೩
ಎರಡು ಸಹಸ್ರಮಾನಕ್ಕೂ
ಹಿಂದೆ ಹೇಳಿದ
ಬುದ್ಧ : ದೇವರಿದ್ದಾನೆಯೋ
ಇಲ್ಲವೋ,
ಪರಲೋಕವಿದೆಯೋ
ಇಲ್ಲವೋ
ಯಾರಿಗೆ ಬೇಕು
ಅದೆಲ್ಲ? ನಮ್ಮ ಕಣ್ಣೆದುರಿಗೇ
ಇದೆ ಒಂದು ದುಃಖಭೂಯಿಷ್ಠವಾದ
ಜಗತ್ತು.
ಆ ದುಃಖವನ್ನೊಂದಿಷ್ಟು
ಕಡಿಮೆ ಮಾಡುವುದು
ಸಾಧ್ಯವಾದರೆ
ನಿಮಗೆ, ಅದೇ ಪರಮಾರ್ಥ.
ಮಹಾ ಅನುಭಾವಿ
ಅಲ್ಲಮ ಹೇಳಿದನು ಗುಹೇಶ್ವರ
ಲಿಂಗಕ್ಕೆ: ನಾ
ದೇವನಲ್ಲದೆ ನೀ ದೇವನೆ?
ನೀ ದೇವನಾದೊಡೆ
ಎನ್ನನೇಕೆ ಸಲಹೆ?
ಆರೈದು ಒಂದು
ಕುಡಿಕೆ ಉದಕವನೆರೆವೆ
ಹಸಿವಾದಾಗ ಒಂದು
ತುತ್ತು ಓಗರವನೀವೆ
ನಾ ದೇವ ಕಾಣಾ
ಗುಹೇಶ್ವರ.
೪
ಕೊನೆಗೆ ನಿಲ್ಲುವುದಿಷ್ಟೆ:
ನಾವೆಷ್ಟು ಎತ್ತರ
ನಮ್ಮ ದೇವರೂ
ಅಷ್ಟೇ ಎತ್ತರ!
No comments:
Post a Comment
Note: Only a member of this blog may post a comment.