ನಾ ಚಿಕ್ಕವನಾಗಿದ್ದಾಗ...
- ಬಿ. ಆರ್. ಲಕ್ಷ್ಮಣರಾವ್
ನಾ ಚಿಕ್ಕವನಾಗಿದ್ದಾಗ ಅಪ್ಪ ಹೇಳುತ್ತಿದ್ದರು
ಈ ನಿಂಬೆಯ ಗಿಡದಿಂದೊಂದು ಒಳ್ಳೆಯ ಪಾಠವ ಕಲಿ ಮಗು
ನೀ ಪ್ರೇಮದಲ್ಲಿ ಎಂದೂ ನಂಬಿಕೆ ಇಡಬೇಡಾ ಮರಿ
ಆ ಪ್ರೇಮವು ಸಹ ನಿಂಬೆಯ ಗಿಡದಂತೆಂಬುದ ನೀ ತಿಳಿ
ನಿಂಬೆ ಗಿಡ ತುಂಬ ಚಂದ
ನಿಂಬೆಯ ಹೂವು ತುಂಬ ಸಿಹಿ
ಆದರೆ ನಿಂಬೆಯ ಹಣ್ಣು ಕಂದ
ತಿನ್ನಲು ಬಹಳ ಹುಳಿ ಕಹಿ ||
ಯೌವ್ವನದಲ್ಲಿ ನಾನು ಒಂದು ಹುಡುಗಿಯ ಪ್ರೇಮಿಸಿದೆ
ಆ ಹುಡುಗಿಯು ನನಗೆ ಊಡಿಸುತಿದ್ದಳು ದಿನವು ಪ್ರೇಮಸುಧೆ
ಸೂರ್ಯನತ್ತಲೆ ಸೂರ್ಯ ಕಾಂತಿ ಮೊಗವೆತ್ತಿ ತಿರುಗುವಂತೆ
ಆ ಹುಡುಗಿಯ ಮೋಹದಲ್ಲಿ ಅಪ್ಪನ ಮಾತ ನಾ ಮರೆತೆ
ನಿಂಬೆಯ ಗಿಡದ ರೆಂಬೆ ರೆಂಬೆಯಲು ನೂರು ನೂರು ಮುಳ್ಳು
ಹುಡುಗಿಯ ಪ್ರೇಮದ ಮಾತುಗಳೆಲ್ಲ ಶುದ್ಧ ಕಪಟ ಸುಳ್ಳು
ಬೇರೊಬ್ಬನ ಕೊಬ್ಬಿಗೆ ಶಾಖವಾಗಿಹಳು ನನ್ನ ಹುಡುಗಿ ಇಂದು
ಅಪ್ಪನ ಕಿರುನಗೆ ರೇಗಿಸುತ್ತಿದೆ ಬುದ್ಧಿ ಬಂತೆ ಎಂದು
No comments:
Post a Comment
Note: Only a member of this blog may post a comment.