ಈ ಬಾನು ಈ ಚುಕ್ಕಿ...
- ಎನ್.ಎಸ್. ಲಕ್ಷ್ಮೀನಾರಾಯಣ ಭಟ್ಟ
ಈ ಬಾನು ಈ ಚುಕ್ಕಿ ಈ ಹೂವು ಈ ಹಕ್ಕಿ ||
ತೇಲಿ ಸಾಗುವ ಮುಗಿಲು ಹರುಷ ಉಕ್ಕಿ
ಯಾರು ಇಟ್ಟರು ಇವನು ಹೀಗೆ ಇಲ್ಲಿ
ತುದಿ ಮೊದಲು ತಿಳಿಯದೀ ನೀಲಿಯಲಿ
ಒಂದೊಂದು ಹೂವಿಗೂ ಒಂದೊಂದು ಬಣ್ಣ
ಒಂದೊಂದು ಜೀವಕು ಒಂದೊಂದು ಕಣ್ಣ
ಯಾವುದೋ ಬಗೆಯಲ್ಲಿ ಎಲ್ಲರಿಗು ಅನ್ನ
ಕೊಟ್ಟ ಕರುಣೆಯ ಮೂಲ ಮರೆಸಿಹುದು ತನ್ನ
ನೂರಾರು ನದಿ ಕುಡಿದು ಮೀರದ ಕಡಲು
ಭೋರೆಂದು ಸುರಿಸುರಿದು ಆರದ ಮುಗಿಲು
ಸೇರಿಯೂ ಕೋಟಿ ತಾರೆ ತುಂಬದ ಬಯಲು
ಯಾರದೀ ಮಾಯೆ ಯಾವ ಬಿಂಬದ ನೆರಳು
ಹೊರಗಿರುವ ಪರಿಯೆಲ್ಲ ಅಡಗಿಹುದೇ ಒಳಗೆ
ಹುಡುಕಿದರೆ ಕೀಲಿಕೈ ಸಿಗದೆ ಎದೆಯೊಳಗೆ
ತಿಳಿಯದೆ ಅದರಲ್ಲಿ ಕುಳಿತಿರುವೆ ನೀನೆ
ಎನ್ನುವರು ನನಗೀಗ ಸೋಜಿಗವು ನಾನೆ
No comments:
Post a Comment
Note: Only a member of this blog may post a comment.