Kannada Song lyrics - ಕನ್ನಡ ಸಾಹಿತ್ಯ - ಕನ್ನಡ ಹಾಡುಗಳ ಲಿರಿಕ್ಸ್ -

ಕನ್ನಡ ಚಲನಚಿತ್ರ ಗೀತೆಗಳ , ಕವನಗಳ , ಜನಪದ ಗೀತೆಗಳ , ವಚನಗಳ , ದಾಸರ ಪದಗಳ , ಭಾವಗೀತೆಗಳ ಸಂಗ್ರಹ ...

Thursday, August 24, 2017

ಬಸವಣ್ಣನವರ ವಚನಗಳು

  Sandeep T Gowda       Thursday, August 24, 2017

ಬಸವಣ್ಣನವರ ವಚನಗಳು

ಉಂಬ ಬಟ್ಟಲು ಬೇರೆ ಕಂಚಲ್ಲ ನೋಡುವ ಕನ್ನಡಿ ಬೇರೆ ಕಂಚಲ್ಲ ಭಾಂಡ ಒಂದೇ ಭಾಜನ ಒಂದೇ ಬೆಳಗೇ ಕನ್ನಡಿ ಎನಿಸಿತ್ತಯ್ಯಾ ಅರಿದಡೆ ಶರಣ ಮರೆದಡೆ ಮಾನವ ಮರೆಯದೆ ಪೂಜಿಸು ಕೂಡಲ ಸಂಗನ
ನೀರಿಂಗೆ ನೈದಿಲೆಯೆ ಶೃಂಗಾರ ಸಮುದ್ರಕ್ಕೆ ತೆರೆಯೇ ಶೃಂಗಾರ ನಾರಿಗೆ ಗುಣವೆ ಶೃಂಗಾರ ಗಗನಕ್ಕೆ ಚಂದ್ರಮನೆ ಶೃಂಗಾರ ನಮ್ಮ ಕೂಡಲಸಂಗನ ಶರಣರಿಗೆ ನೊಸಲ ವಿಭೂತಿಯೆ ಶೃಂಗಾರ
ನರ ಕೂರಂಬಿನಲೆಚ್ಚ ಅವಂಗೊಲಿದೆಯಯ್ಯಾ ಅರಳಂಬಿನಲೆಚ್ಚ ಕಾಮನನುರುಹಿದೆ ಇರುಳು ಹಗಲೆನ್ನದೆ ಪ್ರಾಣಘಾತಕವ ಮಾಡಿದ ಬೇಡನ ಕೈಲಾಸಕೊಯ್ದೆಯಯ್ಯಾ ಎನ್ನನೇತಕೊಲ್ಲೆ ಕೂಡಲಸಂಗಮದೇವಾ?
ನಾದಪ್ರಿಯ ಶಿವನೆಂಬರು, ನಾದಪ್ರಿಯ ಶಿವನಲ್ಲವಯ್ಯಾ ವೇದಪ್ರಿಯ ಶಿವನೆಂಬರು, ವೇದಪ್ರಿಯ ಶಿವನಲ್ಲವಯ್ಯಾ ನಾದವ ನುಡಿಸಿದ ರಾವಳಂಗೆ ಅರೆಆಯುಷ್ಯವಾಯಿತ್ತು ವೇದವನೋದಿದ ಬ್ರಹ್ಮನ ಶಿರ ಹೋಯಿತ್ತು ನಾದಪ್ರಿಯನೂ ಅಲ್ಲ ವೇದಪ್ರಿಯನೂ ಅಲ್ಲ ಭಕ್ತಿಪ್ರಿಯ ನಮ್ಮ ಕೂಡಲಸಂಗಮದೇವ.
ಕಂಡ ಭಕ್ತರಿಗೆ ಕೈ ಮುಗಿವಾತನೆ ಭಕ್ತ ಮೃದು ವಚನವೆ ಸಕಲ ಜಪಂಗಳಯ್ಯಾ ಮೃದು ವಚನವೆ ಸಕಲ ತಪಂಗಳಯ್ಯಾ ಸದುವಿನಯವೆ ಸದಾಶಿವನ ಒಲುಮೆಯಯ್ಯಾ ಕೂಡಲಸಂಗಮದೇವನಂತಲ್ಲದೊಲ್ಲನಯ್ಯಾ.
ಮಾರಿ ಮಸಣಿಯೆಂಬವು ಬೇರಿಲ್ಲ ಕಾಣಿರೋ ಮಾರಿಯೆಂಬುದೇನು? ಕಂಗಳು ತಪ್ಪಿ ನೋಡಿದರೆ ಮಾರಿ ನಾಲಗೆ ತಪ್ಪಿ ನೋಡಿದರೆ ಮಾರಿ ನಮ್ಮ ಕೂಡಲಸಂಗಮದೇವರ ನೆನಹ ಮರೆದರೆ ಮಾರಿ.
ಛಲಬೇಕು ಶರಣಂಗೆ ಪರಧನವನೊಲ್ಲೆನೆಂಬ ಛಲಬೇಕು ಶರಣಂಗೆ ಪರಸತಿಯನೊಲ್ಲೆನೆಂಬ ಛಲಬೇಕು ಶರಣಂಗೆ ಪರದೈವವನೊಲ್ಲೆನೆಂಬ ಛಲಬೇಕು ಶರಣಂಗೆ ಲಿಂಗಜಂಗಮವನೊಂದೆಂಬ ಛಲಬೇಕು ಶರಣಂಗೆ ಪ್ರಸಾದ ದಿಟವೆಂಬ ಛಲವಿಲ್ಲದವರ ಮೆಚ್ಚ ಕೂಡಲಸಂಗಮದೇವಾ.
ಜ್ಞಾನದ ಬಲದಿಂದ ಅಜ್ಞಾನದ ಕೇಡ ನೋಡಯ್ಯಾ ಜ್ಯೋತಿಯ ಬಲದಿಂದ ತಮಂಧದ ಕೇಡ ನೋಡಯ್ಯಾ ಸತ್ಯದ ಬಲದಿಂದ ಅಸತ್ಯದ ಕೇಡ ನೋಡಯ್ಯಾ ಪರುಷದ ಬಲದಿಂದ ಅವಲೋಹದ ಕೇಡ ನೋಡಯ್ಯಾ ಕೂಡಲಸಂಗನ ಶರಣರ ಅನುಭಾವದಿಂದ ಎನ್ನ ಭವದ ಕೇಡ ನೋಡಯ್ಯಾ.
ಚಕೋರಂಗೆ ಚಂದ್ರಮನ ಬೆಳಗಿನ ಚಿಂತೆ ಅಂಬುಜಗೆ ಭಾನುವಿನ ಉದಯದ ಚಿಂತೆ ಭ್ರಮರಂಗೆ ಪರಿಮಳದ ಬಂಡುಂಬ ಚಿಂತೆ ಯಮಗೆ ನಮ್ಮ ಕೂಡಲಸಂಗಮದೇವರ ಚಿಂತೆ
ನೀನೊಲಿದರೆ ಕೊರಡು ಕೊನರುವುದಯ್ಯ ನೀನೊಲಿದರೆ ಬರಡು ಹಯನಹುದಯ್ಯ ನೀನೊಲಿದರೆ ವಿಷವಮೃತವಹುದಯ್ಯ ನೀನೊಲಿದರೆ ಸಕಲ ಪಡಿಪದಾರ್ಥ ಇದಿರಲಿಪ್ಪವು ಕೂಡಲಸಂಗಮದೇವ
ನೀರಿಂಗೆ ನೈದಿಲೆಯೇ ಶೃಂಗಾರ ಸಮುದ್ರಕ್ಕೆ ತೆರೆಯೇ ಶೃಂಗಾರ ನಾರಿಗೆ ಗುಣವೇ ಶೃಂಗಾರ ಗಗನಕ್ಕೆ ಚಂದ್ರಮನೇ ಶೃಂಗಾರ ನಮ್ಮ ಕೂಡಲಸಂಗಮನ ಶರಣರಿಗೆ ನೊಸಲ ವಿಭೂತಿಯೇ ಶೃಂಗಾರ
ಹುತ್ತವ ಬಡಿದರೆ ಉರಗ ಸಾವುದೆ ಘೋರತಪವ ಮಾಡಿದರೇನು ಅಂತರಂಗ-ಆತ್ಮಶುದ್ಧಿಯಿಲ್ಲದವರನೆಂತು ನಂಬುವನಯ್ಯ ಕೂಡಲಸಂಗಮದೇವ?
ಲೋಕದ ಡೊಂಕ ನೀವೇಕೆ ತಿದ್ದುವಿರಿ? ನಿಮ್ಮ ನಿಮ್ಮ ತನುವ ಸಂತೈಸಿಕೊಳ್ಳಿ ನಿಮ್ಮ ನಿಮ್ಮ ಮನವ ಸಂತೈಸಿಕೊಳ್ಳಿ ನೆರೆಮನೆಯ ದು:ಖಕ್ಕೆ ಅಳುವರ ಮೆಚ್ಚ ನಮ್ಮ ಕೂಡಲಸಂಗಮದೇವ
ಹಾವು ತಿಂದವರ ನುಡಿಸಬಹುದು ಗರ ಹೊಡೆದವರ ನುಡಿಸಬಹುದು ಸಿರಿಗರ ಹೊಡೆದವರ ನುಡಿಸಬಾರದು ನೋಡಯ್ಯ ಬಡತನವೆಂಬ ಮಂತ್ರವಾದಿ ಹೋಗಲು ಒಡನೆ ನುಡಿವರಯ್ಯ ಕೂಡಲಸಂಗಮದೇವ
ಕಳಬೇಡ ಕೊಲಬೇಡ ಹುಸಿಯ ನುಡಿಯಲು ಬೇಡ ಮುನಿಯ ಬೇಡ ಅನ್ಯರಿಗೆ ಅಸಹ್ಯಪಡಬೇಡ ತನ್ನ ಬಣ್ಣಿಸಬೇಡ ಇದಿರ ಹಳಿಯಲು ಬೇಡ ಇದೇ ಅಂತರಂಗಶುದ್ಧಿ ಇದೇ ಬಹಿರಂಗಶುದ್ಧಿ ಇದೇ ನಮ್ಮ ಕೂಡಲಸಂಗಮನೊಲಿಸುವ ಪರಿ
ಮಾಡುವಂತಿರಬೇಕು, ಮಾಡದಂತಿರಬೇಕು! ಮಾಡುವ ಮಾಟದೊಳಗೆ ತಾನಿಲ್ಲದಿರಬೇಕು!! ನೋಡುವಂತಿರಬೇಕು, ನೋಡದಂತಿರಬೇಕು! ನೋಡುವ ನೋಟದೊಳಗೆ ತಾನಿಲ್ಲದಿರಬೇಕು!! ನಮ್ಮ ಕೂಡಲಸಂಗಮದೇವರ ನೆನೆವುತ್ತ ನೆನೆವುತ್ತ ನೆನೆಯದಂತಿರಬೇಕು!
ಮಾಡಿ ಮಾಡಿ ಕೆಟ್ಟರು ಮನವಿಲ್ಲದೆ. ನೀಡಿ ನೀಡಿ ಕೆಟ್ಟರು ನಿಜವಿಲ್ಲದೆ. ಮಾಡುವ ನೀಡುವ ನಿಜಗುಣವುಳ್ಳಡೆ, ಕೂಡಿಕೊಂಬುವ ನಮ್ಮ ಕೂಡಲಸಂಗಮದೇವ
ಕಲ್ಲನಾಗರ ಕಂಡರೆ ಹಾಲನೆರೆ ಎಂಬರು; ದಿಟನಾಗರ ಕಂಡರೆ ಕೊಲ್ಲು ಕೊಲ್ಲು ಎಂಬರಯ್ಯ! ಉಂಬ ಜಂಗಮ ಬಂದರೆ ನಡೆ ಎಂಬರು; ಉಣ್ಣದ ಲಿಂಗಕ್ಕೆ ಬೋನವ ಹಿಡಿ ಎಂಬರಯ್ಯ! ನಮ್ಮ ಕೂಡಲಸಂಗನ ಶರಣರ ಕಂಡು ಉದಾಸೀನವ ಮಾಡಿದರೆ, ಕಲ್ಲತಾಗಿದ ಮಿಟ್ಟೆಯಂತಪ್ಪರಯ್ಯ!
ಒಲೆ ಹತ್ತಿ ಉರಿದರೆ ನಿಲ ಬಹುದಲ್ಲದೆ ಧರೆ ಹತ್ತಿ ಉರಿದರೆ ನಿಲ ಬಾರದು ಏರಿ ನೀರುಂಬಡೆ, ಬೇಲಿ ಕೈಯ ಮೇವಡೆ ನಾರಿ ತನ್ನ ಮನೆಯಲ್ಲಿ ಕಳುವಡೆ ತಾಯ ಮೊಲೆವಾಲು ನಂಜಾಗಿ ಕೊಲುವಡೆ ಇನ್ನಾರಿಗೆ ದೂರುವೆ ತಂದೆ ಕೂಡಲಸಂಗಮದೇವ ನೀ ಹುಟ್ಟಿಸಿ ಜೀವನ ಭವದುಃಖಿಯ ಮಾಡಿದ ಬಳಿಕ. ಬಿಡಿಸುವರಾರುಂಟು ?
ಎನ್ನ ಚಿತ್ತವು ಅತ್ತಿಯ ಹಣ್ಣು ನೋಡಯ್ಯ, ವಿಚಾರಿಸಿದರೇನು ಹುರುಳಿಲ್ಲವಯ್ಯ. ಪ್ರಪಂಚಿನ ಡಂಬಿನಲ್ಲಿ ಎನ್ನನೊಂದು ರೂಹುಮಾಡಿ ನೀವಿರಿಸಿದಿರಯ್ಯ ಕೂಡಲಸಂಗಮದೇವ.
ಎನ್ನ ಮನವೆಂಬ ಮರ್ಕಟನು ತನುವಿಕಾರವೆಂಬ ಅಲ್ಪಸುಖದಾಸೆ ಮಾಡಿ, ವೃಥಾ ಭ್ರಮಣಗೊಂಡು, ನಾನಾ ದೆಸೆಗೆ ಲಂಘಿಸಿ ಅಳಲಿಸಿ ಬಳಲಿಸುತ್ತಿದೆ ನೋಡಾ! ಕೂಡಲಸಂಗಮದೇವರೆಂಬ ವೃಕ್ಷಕ್ಕೆ ಲಂಘಿಸಿ ಅಪರಿಮಿತ ಸುಖವನೆಯ್ದದು ನೋಡಾ!
ನರವಿಂಧ್ಯದೊಳಗೆನ್ನ ಹುಲುಗಿಳಿಯ ಮಾಡಿ ಸಲಹುತ್ತ, "ಶಿವಶಿವಾ" ಎಂದೋದಿಸಯ್ಯ. ಭಕ್ತಿ ಎಂಬ ಪಂಜರದೊಳಗಿಕ್ಕಿ ಸಲಹು ಕೂಡಲಸಂಗಮದೇವ.
ಅತ್ತಲಿತ್ತ ಹೋಗದಂತೆ ಹೆಳವನ ಮಾಡಯ್ಯ ತಂದೆ, ಸುತ್ತಿ ಸುಳಿದು ನೋಡದಂತೆ ಅಂಧಕನ ಮಾಡಯ್ಯ ತಂದೆ. ಮತ್ತೊಂದ ಕೇಳದಂತೆ ಕಿವುಡನ ಮಾಡಯ್ಯ ತಂದೆ. ನಿಮ್ಮ ಶರಣರ ಪಾದವಲ್ಲದೆ ಅನ್ಯವಿಷಯಕ್ಕೆಳಸದಂತೆ ಇರಿಸು ಕೂಡಲಸಂಗಮದೇವ.
ಇವನಾರವ, ಇವನಾರವ, ಇವನಾರವನೆಂದೆನಿಸದಿರಯ್ಯ. ಇವ ನಮ್ಮವ, ಇವ ನಮ್ಮವ, ಇವನಮ್ಮವನೆಂದೆನಿಸಯ್ಯ ಕೂಡಲಸಂಗಮದೇವಯ್ಯ ನಿಮ್ಮ ಮನೆಯ ಮಗನೆಂದೆನಿಸಯ್ಯ.
ಮಡಕೆಯ ಮಾಡುವೊಡೆ ಮಣ್ಣೇ ಮೊದಲು, ತೊಡಿಗೆಯ ಮಾಡುವೊಡೆ ಹೊನ್ನೇ ಮೊದಲು, ಶಿವಪಥ ಅರಿವೊಡೆ ಗುರುಪಥ ಮೊದಲು, ಕೂಡಲಸಂಗಮ ದೇವರನರಿವೊಡೆ, ಶರಣರ ಸಂಗವೇ ಮೊದಲು, ಮೊದಲು!!
ದಯವಿಲ್ಲದ ಧರ್ಮವಾವುದಯ್ಯಾ ? ದಯವೇ ಬೇಕು ಸಕಲ ಪ್ರಾಣಿಗಳಲ್ಲಿಯೂ ದಯವೇ ಧರ್ಮದ ಮೂಲವಯ್ಯೂ ಕೂಡಲಸಂಗಯ್ಯನಂತಲ್ಲದೊಲ್ಲನಯ್ಯೂ !!
ತನಗೆ ಮುನಿವವರಿಗೆ ತಾ ಮುನಿಯಲೇಕಯ್ಯಾ? ತನಗಾದ ಆಗೇನು? ಅವರಿಗಾದ ಚೇಗೇನು? ತನುವಿನ ಕೋಪ ತನ್ನ ಹಿರಿಯತನದ ಕೇಡು? ಮನದಾ ಕೋಪ ತನ್ನರಿವಿನಾ ಕೇಡು ಮನೆಯೊಳಗಣ ಕಿಚ್ಚು ಮನೆಯ ಸುಟ್ಟಲ್ಲದೆ ನೆರೆಮನೆಯ ಸುಡದು ಕೂಡಲಸಂಗಮದೇವಾ !!
ಜನಿತಕ್ಕೆ ತಾಯಾಗಿ ಹೆತ್ತಳು ಮಾಯೆ! ಮೋಹಕ್ಕೆ ಮಗಳಾಗಿ ಹುಟ್ಟಿದಳು ಮಾಯೆ! ಕೂಟಕ್ಕೆ ಸ್ರೀಯಾಗಿ ಕೂಡಿದಳು ಮಾಯೆ! ಇದಾವ ಪರಿಯಲ್ಲಿ ಕಾಡಿತ್ತು ಮಾಯೆ? ಈ ಮಾಯೆಯ ಕಳವೊಡೆ ಎನ್ನಳವಲ್ಲ; ನೀವೇ ಬಲ್ಲಿರಿ ಕೂಡಲಸಂಗಮದೇವಾ!!
ತನು ನಿಮ್ಮದೆಂದ ಬಳಿಕ ಎನಗೆ ಬೇರೆ ತನುವಿಲ್ಲ ಮನ ನಿಮ್ಮದೆಂದ ಬಳಿಕ ಬೇರೆ ಮನವಿಲ್ಲ ಧನ ನಿಮ್ಮದೆಂದ ಬಳಿಕ ಎನಗೆ ಬೇರೆ ಧನವಿಲ್ಲ ಇಂತೀ ತ್ರಿವಿಧವೂ ನಿಮ್ಮದೆಂದರಿದ ಬಳಿಕ ಎನಗೆ ಬೇರೆ ವಿಚಾರವುಂಟೆ ಕೂಡಲಸಂಗಮದೇವಾ!!
ತಂದೆ ನೀನು ತಾಯಿ ನೀನು ಬಂಧು ನೀನು ಬಳಗ ನೀನು ನೀನಲ್ಲದೆ ಮತ್ತಾರೂ ಇಲ್ಲವಯ್ಯಾ ಕೂಡಲಸಂಗಮದೇವಾ ಹಾಲಲ್ಲದ್ದು ನೀರಲ್ಲದ್ದು ನಿಮ್ಮ ಧರ್ಮ!!
ಉದಕದೊಳಗೆ ಬೈಚಿಟ್ಟ ಬೈಕೆಯ ಕಿಚ್ಚಿನಂತೆ ಇದ್ದಿತ್ತು;
ಸಸಿಯೊಳಗಣ ರಸದ ರುಚಿಯಂತೆ ಇದ್ದಿತ್ತು;
ನನೆಯೊಳಗಣ ಪರಿಮಳದಂತೆ ಇದ್ದಿತ್ತು;
ಕೂಡಲಸಂಗಮದೇವರ ನಿಲವು ಕನ್ನೆಯ ಸ್ನೇಹದಂತೆ ಇದ್ದಿತ್ತು.
ತಂದೆ ನೀನು ತಾಯಿ ನೀನು ಬಂಧು ನೀನು ಬಳಗ ನೀನು ನೀನಲ್ಲದೆ ಮತ್ತಾರೂ ಇಲ್ಲವಯ್ಯಾ ಕೂಡಲ ಸಂಗಮದೇವಾ ಹಾಲಲದ್ದು ನೀರಲದ್ದು.
ಹಾವು ತಿಂದವರ ನುಡಿಸಬಹುದು ಗರ ಹೊಡೆದವರ ನುಡಿಸಬಹುದು ಸಿರಿಗರ ಹೊಡೆದವರ ನುಡಿಸಲು ಬಾರದು ನೋಡಯ್ಯಾ ಬಡತನವೆಂಬ ಮಂತ್ರವಾದಿ ಹೊಗಲು ಒಡನೆ ನುಡಿವರು ಕೂಡಲ ಸಂಗಮದೇವಾ
ಸಾರ ಸಜ್ಜನರ ಸಂಗವ ಮಾಡುವುದು ದೂರ ದುರ್ಜನರ ಸಂಗ ಬೇಡವಯ್ಯಾ ಆವ ಹಾವಾದಡೇನು ವಿಷವೊಂದೇ ಅಂಥವರ ಸಂಗ ಬೇಡವಯ್ಯಾ ಅಂತರಂಗಶುದ್ಧವಿಲ್ಲದವರ ಸಂಗ ಸಿಂಗಿ ಕಾಳಕೂಟ ವಿಷವೋ ಕೂಡಲ ಸಂಗಮದೇವಾ
ಅತ್ತಲಿತ್ತ ಹೋಗದಂತೆ ಹೆಳವನ ಮಾಡಯ್ಯ ತಂದೆ ಸುತ್ತಿ ಸುಳಿದು ನೋಡದಂತೆ ಅಂಧಕನ ಮಾಡಯ್ಯ ತಂದೆ ಮತ್ತೊಂದ ಕೇಳದಂತೆ ಕಿವುಡನ ಮಾಡಯ್ಯ ತಂದೆ ನಿಮ್ಮ ಶರಣರ ಪಾದವಲ್ಲದೆ ಅನ್ಯ ವಿಷಯಕ್ಕೆಳೆಸದಂತೆ ಇರಿಸು ಕೂಡಲಸಂಗಮದೇವಾ.
ಮರನೇರಿದ ಮರ್ಕಟನಂತೆ ಹಲವು ಕೊಂಬೆಗೆ ಹಾಯುತ್ತಲಿದ್ದೇನೆ. ಬೆಂದ ಮನವ ನಾನೆಂತು ನಂಬುವೆನಯ್ಯಾ? ಎಂತು ನಚ್ಚುವೆನಯ್ಯಾ? ಎನ್ನ ತಂದೆ ಕೂಡಲ ಸಂಗಮದೇವಯ್ಯನಲ್ಲಿಗೆ ಹೋಗಲೀಯದಯ್ಯಾ
ಮನೆಯೊಳಗೆ ಮನೆಯೊಡೆಯನಿದ್ದಾನೊ ಇಲ್ಲವೊ? ಹೊಸ್ತಿಲಲಿ ಹುಲ್ಲು ಹುಟ್ಟಿ ಮನೆಯೊಳಗೆ ರಜ ತುಂಬಿ ಮನೆಯೊಳಗೆ ಮನೆಯೊಡೆಯನಿದ್ದಾನೊ ಇಲ್ಲವೊ? ತನುವಿನಲ್ಲಿ ಹುಸಿ ತುಂಬಿ ಮನದೊಳಗೆ ವಿಷಯ ತುಂಬಿ ಮನೆಯೊಳಗೆ ಮನೆಯೊಡೆಯನಿಲ್ಲ ಕೂಡಲ ಸಂಗಮದೇವಾ.
ನುಡಿದರೆ ಮುತ್ತಿನ ಹಾರದಂತಿರಬೇಕು ನುಡಿದರೆ ಮಾಣಿಕ್ಯದ ದೀಪ್ತಿಯಂತಿರಬೇಕು ನುಡಿದರೆ ಸ್ಫಟಿಕದ ಶಲಾಕೆಯಂತಿರಬೇಕು ನುಡಿದರೆ ಲಿಂಗ ಮೆಚ್ಚಿ ಅಹುದಹುದೆನಬೇಕು ನುಡಿಯೊಳಗಾಗಿ ನಡೆಯದಿದ್ದಡೆ ಕೂಡಲಸಂಗಮದೇವನೆಂತೊಲಿವನಯ್ಯಾ
ಹಬ್ಬಕ್ಕೆ ತಂದ ಹರಕೆಯ ಕುರಿ ತೋರಣಕ್ಕೆ ತಂದ ತಳಿರ ಮೇಯಿತ್ತು, ಕೊಂದಹರೆಂಬುದನರಿಯದೆ ಬೆಂದ ಒಡಲ ಹೊರೆಯಹೋಯಿತ್ತು, ಅಂದಂದೆ ಹುಟ್ಟಿತ್ತು ಅಂದಂದೆ ಹೊಂದಿತ್ತು ಕೊಂದವರುಳಿದರೆ ಕೂಡಲ ಸಂಗಮದೇವಾ.
ದಯವಿಲ್ಲದ ಧರ್ಮವದೇವುದಯ್ಯ ದಯವೇ ಬೇಕು ಸಕಲ ಪ್ರಾಣಿಗಳೆಲ್ಲರಲ್ಲಿ ದಯವೇ ಧರ್ಮದ ಮೂಲವಯ್ಯ ಕೂಡಲಸಂಗಮದೇವನಂತಲ್ಲದೊಲ್ಲನಯ್ಯ.
**********************************************************
ಗ್ರಂಥಋಣ: wikipedia
ಸಮಗ್ರ ವಚನ ಸಂಪುಟಗಳು, ಕನ್ನಡ ಪುಸ್ತಕ ಪ್ರಾಧಿಕಾರ, ಬೆಂಗಳೂರು
lingayatreligion.com
logoblog

Thanks for reading ಬಸವಣ್ಣನವರ ವಚನಗಳು

Previous
« Prev Post

No comments:

Post a Comment

Note: Only a member of this blog may post a comment.