ನೋಡು ಇದೊ ಇಲ್ಲರಳಿ ನಗುತಿದೆ
ಏಳು ಸುತ್ತಿನ ಮಲ್ಲಿಗೆ.
ಇಷ್ಟು ಹಚ್ಚನೆ ಹಸುರ ಗಿಡದಿಂ-
ದೆಂತು ಮೂಡಿತೊ ಬೆಳ್ಳಗೆ !
ಮೇಲೆ ನಭದಲಿ ನೂರು ತಾರೆಗ-
ಳರಳಿ ಮಿರುಗುವ ಮುನ್ನವೆ
ಬೆಳ್ಳಿಯೊಂದೇ ಬೆಳಗುವಂದದಿ
ಗಿಡದೊಳೊಂದೇ ಹೂವಿದೆ.
ಸತ್ವಶೀಲನ ಧ್ಯಾನಮೌನವೆ
ಅರಳಿ ಬಂದೊಲು ತೋರಿದೆ !
ಒಲವು ತುಂಬಿದ ಮುಗುದೆಯೆದೆಯಿಂ-
ದೊಗೆದ ನಲ್ನುಡಿಯಂತಿದೆ.
ಕವಿಯ ಮನದಿಂದುದಿಸಿ ಮೆಲ್ಲನೆ
ಅರಳಿ ಬರುವೊಲು ಕಲ್ಪನೆ,
ಎಂಥ ನವುರಿನ ಕುಶಲ ಕಲೆಯಿದು
ತನಗೆ ತಾನೇ ಮೂಡಿದೆ.
ಮೌನದಲಿ ಮೊಳೆಯುತ್ತ ಮೆಲ್ಲನೆ
ತನಗೆ ತಾನೆ ತಿಳಿಯದೆ
ಮೊಗ್ಗಿನಲಿ ಮಲಗಿದ್ದ ಚೆಲುವಿದು
ಇಂದು ಕಣ್ಣನು ತೆರೆದಿದೆ.
ಎನಿತು ನವುರಾಗಿಹವು ದಳಗಳು
ಹಸುಳೆ ಕಾಣುವ ಕನಸೊಲು !
ಏನು ಇಂಪಿನ ಕಂಪು ಇದರದು
ಆ ಮಹಾತ್ಮರ ಮನದೊಲು
ಹರಿವ ಮನವನು ಹಿಡಿದು ಒಂದೆಡೆ
ನಿಲಿಸಿ ತೊಳೆದಿದೆ ಹೂವಿದು.
ಚೆಲುವು ಬಾಳನು ಹಸುನುಗೊಳಿಸುವ
ಅಚ್ಚರಿಯ ಪರಿ ಎಂಥದು !
No comments:
Post a Comment
Note: Only a member of this blog may post a comment.