ಅಕೋ ಶ್ಯಾಮ ಅವಳೇ ರಾಧೆ...
- ಪು.ತಿ. ನರಸಿಂಹಾಚಾರ್
ಅಕೋ ಶ್ಯಾಮ ಅವಳೇ ರಾಧೆ
ನಲಿಯುತಿಹರು ಕಾಣಿರೇ ||
ನಾವೆ ರಾಧೆ ಅವನೇ ಶ್ಶಾಮ
ಬೇರೆ ಬಗೆಯ ಮಾಣಿರೇ
ಕಲರವದೊಳು ಯಮುನೆ ಹರಿಯೆ
ಸೋಬಾನೆಯ ತರುಗಳುಲಿಯೆ
ತೆನೆತೆನೆಯೊಳು ಹರಸಿದಂತೆ
ಬಾನಿಂ ಜೊನ್ನ ಭೂಮಿಗಿಳಿಯೆ
ಕಂಪ ಬಿಡುವ ದಳಗಳಂತೆ
ಸುತ್ತಲರಳಿ ಕೊಳ್ಳಿರೇ
ಒಲುಮೆಗಿಡುವ ಪ್ರಭಾವಳಿಯ
ತೆರದಿ ಬಳಸಿ ನಿಲ್ಲಿರೇ
ಕಡಗ ಕಂಕಣ ಕಿನಿಕಿನಿಯೆನೆ
ಅಡಿಗೆಯಿರುಲೆ ಝಣರೆನೆ
ಎದೆ ನುಡಿತಕೆ ಚುಕ್ಕಿ ಮಿಡಿಯೆ
ಕೊಳಲನೂದಿ ಕುಣಿವನೆ
ನಮ್ಮ ಮನವ ಕೋದು
ಮಾಲೆ ಗೈದು ಮುಡಿಯುತಿಹನೆನೆ
ಮಾಧವನೂದುವ ಮಧುರ ಗಾನ
ಎದೆಯ ಹಾಯ್ವುದಾಯೆನೆ
ನೋಡಿ ತಣಿಯೆ ಹಾಡಿ ತಣೆಯೆ
ಲೇಸನಾಡಿ ತಣಿಯೆನೆ
ಕುಣಿದು ತಣಿಯೆ ದಣಿದು ತಣಿಯೆ
ದಣಿವಿಲ್ಲದೆ ನಲಿವೆನೆ
No comments:
Post a Comment
Note: Only a member of this blog may post a comment.