ಯಾವುದೀ ಹೊಸ ಸಂಚು...
- ಎನ್. ಎಸ್. ಲಕ್ಷ್ಮಿನಾರಾಯಣ ಭಟ್ಟ
ಯಾವುದೀ ಹೊಸ ಸಂಚು ಎದೆಯಂಚಿನಲಿ ಮಿಂಚಿ ||
ಮನಸು ಕನಸುಗಳನ್ನು ಕಲೆಸಿರುವುದು?
ಗಿರಿಕಮರಿಯಾಳದಲಿ ತೆವಳಿದ್ದ ಭಾವಗಳ
ಮುಗಿಲ ಮಂಚದೊಳಿಟ್ಟು ತೂಗುತಿಹುದು?
ಸತ್ತ ಬಾಳಿಗೆ ಮತ್ತೆ ಅಮೃತವೆರೆದು
ಕತ್ತಲಾಳಗಳಲ್ಲಿ ದೀಪವುರಿದು
ಬಾಳು ಕೊನೆಯೇರುತಿದೆ ಬೆಳಕಿನುತ್ಸವದಲ್ಲಿ
ಮೈಯ ಕಣಕಣದಲ್ಲೂ ಹಿಗ್ಗು ಉರಿದು
ಹೇಗೆ ತಾಳಲಿ ಹೇಳೆ ಈ ಮಧುರ ಅನುಭವವ
ಕಲ್ಪ ವೃಕ್ಷದ ಹಣ್ಣು ಹಿಳಿದ ರುಚಿಯ?
ಹೇಗೆ ತಾಳಲಿ ಹೇಳೆ ಇಂಥ ಭಾವವೆ ನಾಳೆ
ಉಳಿಯದೆಯೆ ಸರಿದೀತು ಎಂಬ ವ್ಯಥೆಯ?
No comments:
Post a Comment
Note: Only a member of this blog may post a comment.