ನಿನ್ನ ಪ್ರೀತಿಯ ಹುಚ್ಚು...
- ಎನ್. ಎಸ್. ಲಕ್ಷ್ಮೀನಾರಾಯಣ ಭಟ್ಟ
ನಿನ್ನ ಪ್ರೀತಿಯ ಹುಚ್ಚು ಸುಳಿಯಲ್ಲಿ ಸಿಕ್ಕಿ
ಏನಾದೆನೋ ಇನಿಯ ಏನಾದೆನೋ? ||
ತೀರದಾಸೆಯ ಬೆಂಕಿ ಉರಿಯಲ್ಲಿ ಉಕ್ಕಿ
ಪಾತ್ರೆಯಾಚೆಗೆ ಸುರಿದ ಹಾಲಾದೆನೋ
ನಿನ್ನ ಬಯಕೆಯ ಹಸಿರು ವನವನ್ನು ಹೊಕ್ಕು
ಏನಾದೆನೋ ಇನಿಯ ಏನಾದೆನೋ?
ದಾರಿ ಸಿಕ್ಕದೇ ಜನರ ಮುಂದೆ ಕಂಗೆಟ್ಟು
ನನ್ನ ಸಾಕಿದ ಮನೆಯ ಹೊರಗಾದೆನೋ
ನಿನಗಾಗಿ ಎಲ್ಲ ಗಡಿಯಾಚೆ ಕಾಲಿಟ್ಟು
ಏನಾದೆನೋ ಇನಿಯ ಏನಾದೆನೋ?
ಕಡೆಗೊಮ್ಮೆ ನೀ ಸಿಕ್ಕು ನಿನ್ನ ಪ್ರೀತಿಯಲಿ
ಮುಗಿಲಾಗಿ ಬಾನೇರಿ ಬೆಳಕಾದೆನೋ
No comments:
Post a Comment
Note: Only a member of this blog may post a comment.